Tuesday 17 February 2009

ಗುಲಾಬಿ ಕೆಸರಿಗಳ ನಡುವೆ ........


ಶರಣಪ್ಪೋ ಶರಣು


ನಮ್ಮ ಮುತಾಲಿಕ್ ಸಾಹೇಬರು ಸಂಸ್ಕೃತಿ ಉಳಿಸೊದಿಕ್ಕಾಗಿ ತಾಳಿ ಮತ್ತೆ ರಾಖಿಗೆ ಹೋಲ್ಸೇಲಾಗಿ ಆರ್ಡರ್ ಕೊಟ್ಟಿದಾರೆ ಅಂತ ಗೊತ್ತಾದಾಗ ಮನಸ್ಸಿನಲ್ಲಿಯೇ ಮಂಡಿಗೆ ತಿಂದೆ. ಏನೋ ಅವರ ಕೃಪೆಯಿಂದಾದರು ನನ್ನ ಜೀವನದಲ್ಲಿ ಒಂದು ಹೆಣ್ಣು ಜೀವದ ಆಗಮನ ಆಗಬಹುದು ಅಂತ.


ನನ್ನ ಬಗ್ಗೆ ಗೊತ್ತಿಲ್ಲದೆ ಇರೋರಿಗೆ ಈಗಲೇ ಹೇಳಿಬಿಡ್ತಿನಿ. ನನಗೆ ಮತ್ತೆ ಹೆಣ್ಣು ಮಕ್ಕಳಿಗೂ ಸ್ವಲ್ಪ ದೂರ. ಸ್ವಲ್ಪ ಏನು, ತುಂಬಾನೆ ದೂರ ಅನ್ನಿ. ಹುಡುಗಿರ ಹತ್ತಿರ ಮಾತಾಡೋದು ಅಂದ್ರೆ ನಂಗೆ ಸಾಹಸ ಮಾಡಿದಂಗೆ. ಅಪ್ಪಿ ತಪ್ಪಿ ಯಾರದ್ರು ಬಂದು ಮಾತಾಡೋದಿಕ್ಕೆ ಶುರು ಮಾಡಿದ್ರೆ ನಾನಂತೂ ಬೆ...ಬೆ...ಬೆ... ನೆ. ಅಂಥದ್ರಲ್ಲಿ ಮನೆನಲ್ಲಿ ನಂಗೆ ಮದುವೆ ವಯಸ್ಸಾಯಿತು ಅಂತ ನಿರ್ಧಾರ ಮಾಡಿದ್ರು. ಅಲ್ಲ ಯಾವ ತಲೆ ಸರಿ ಇರೋ ಹುಡುಗಿ ನನ್ನ ಒಪ್ತಾಳೆ ಅಂತ?.


ಒಂದು ಹುಡುಗಿಗೆ ನನ್ನ ಭಾವಚಿತ್ರ ಕಳುಹಿಸಿದರೆ (ಏನೋ ಇದ್ದಿದ್ರಲ್ಲಿ ನೋಡೊವಂಥ ಫೋಟೋ ಅದು ), ಅವಳು ಪಾಪ ಅದನ್ನ ನೋಡಿ 'ಕಿಟಾರ್' ಅಂತ ಕಿರುಚಿ, ಮೂರು ದಿನ ಚಳಿ ಜ್ವರ ಬಂದು ಮಲ್ಕೊಂಡ್ಬಿಟ್ಟ್ಳಂತೆ. ಹಿಂಗಿರುವಾಗ ನಾನು ಹೇಗೆ ನನಗೆ ಒಂದು ಹುಡುಗಿ ಒಲಿಯುತ್ತಾಳೆ ಅಂತ ಯೋಚಿಸಲಿ?.


ಅದಿಕ್ಕೆ ಮುತಾಲಿಕ್ ಸಾಹೇಬರ ಆರ್ಭಟ ನೋಡಿ ಖುಷಿ ಆಯಿತು. ಸಂತ ವ್ಯಾಲೆಂಟಿನ ಅದೇನು ಮಾಡಿದನೊ, ಏಕೆ ಮಾಡಿದನೋ ಅಂತ ಯಾರಿಗೂ ಗೊತ್ತಿಲ್ಲ. ಆದ್ರೆ ಎಲ್ಲರೂ ಅವನ ಹೆಸರಿನಲ್ಲಿ ಏನೇನೋ ಮಾಡ್ತಾರೆ. ನಾನು ಕೂಡ ಅವನ ಹೆಸರಿನಲ್ಲಿ ಮತ್ತೆ ಮುತಾಲಿಕ್ ಮಾಮನ ದಯೆಯಿಂದ ಒಂದು ಹುಡ್ಗಿನ ಕಟ್ಕೊಂಡ್ಬಿಡೋಣ ಅಂತ ಐಡಿಯಾ ಮಾಡಿದೆ.


ಹೇಗಿದ್ರು ಮುತಾಲಿಕ್ ಮಾಮ ಹೇಳಿದ್ರಲ್ಲ ಫೆಬ್ರುವರಿ ೧೪ ರಂದು ಹುಡ್ಗ ಹುಡ್ಗೀರು ಒಟ್ಟಿಗೆ ಕಾಣಿಸಿದರೆ ತಾಳಿ ಅಥವ ರಾಖಿ ಕಟ್ಟಿಸಿಬಿಡ್ತಾರೆ ಅಂತ. ಜತೆಗೆ ಈಗಿನ ಆರ್ಥಿಕ ಪರಿಸ್ಥಿತಿಲಿ ಹಣ ಖರ್ಚು ಮಾಡಿ ಧಾಂ ಧೂಮಾಗಿ ಹೆಂಗೆರಿ ಮದುವೆ ಮಾಡ್ಕೊಳೋದು?.


೧೪ ರಂದು ಬೆಳಿಗ್ಗೆ ಬೇಗ ಎದ್ದು ನಗರದಲ್ಲಿರುವ ಎಲ್ಲ ಪಾರ್ಕು, ಪಬ್ಬು, ಮಾಲುಗಳನ್ನು ಸುತ್ತಿ, ಯಾವಾಗ ರಾಮನ ಸೇನೆಯವರು ಪ್ರತ್ಯಕ್ಷ ಆಗ್ತಾರೋ, ಅದೇ ಸಮಯಕ್ಕೆ ಅಲ್ಲೇ ಇರೋ ಯಾವುದಾದರು ಚೆನ್ನಾಗಿರೋ ಹುಡುಗಿ ಕೈ ಹಿಡ್ಕೊಂಡ್ ಬಿಡೋದು ಅಂತ ತೀರ್ಮಾನಿಸಿದೆ. ಸೇನೆಯ ಮಂದಿ ಅದನ್ನ ನೋಡಿ ತಾಳಿ ಕಟ್ಟಿಸ್ಬಿಟ್ರೆ ಒಳ್ಳೇದು. ಇಲ್ಲ ತೆಪ್ಪಗೆ ರಾಖಿ ಕಟ್ಟೋದು ಅಂತ ಯೋಚನೆ ಮಾಡಿದೆ. ಆ ಹುಡುಗಿ ಏನಾದ್ರೂ ಕಪಾಳ ಮೋಕ್ಷ ಮಾಡಿದ್ರೆ ಅದನ್ನು ಕಿಮಕ್ಕನ್ನದೆ ತಿಂದು ಇನ್ನೊಂದು ಕಡೆ ಪುನಃ ಪ್ರಯತ್ನಿಸೋದು ಅಂತ ತೀರ್ಮಾನ ಮಾಡಿದ್ದೆ.


ಆದರೆ ಕೆಲವು ಜನ ಈ 'ಪಿಂಕ್ ಚಡ್ಡಿ' ಅಭಿಯಾನ ಶುರು ಮಾಡಿ ನನ್ನ ಆಸೆಗೆ ಕಲ್ಲೆತ್ತಿ ಹಾಕಿಬಿಟ್ಟರು . ಗೊತ್ತಿಲ್ದೆ ಇರೋರಿಗೆ ಈ ಪಿಂಕ್ ಚಡ್ಡಿ ಅಭಿಯಾನ ಏನಪ್ಪಾ ಅಂದ್ರೆ, ಮುತಾಲಿಕ್ ಮಾಮನ 'ತಾಳಿ ಅಥವಾ ರಾಖಿ' ಘರ್ಜನೆಗೆ ವಿರುದ್ಧವಾಗಿ ಈ ವ್ಯಾಲೆಂಟೀನನ ಅನುಯಾಯಿಗಳು ಮುತಾಲಿಕ್ಗೆ ಎಷ್ಟು ಸಾಧ್ಯವಾಗುತ್ತೋ ಅಷ್ಟು ಗುಲಾಬಿ ಬಣ್ಣದ ಹೆಂಗಸರ ಒಳ ಉಡುಪು ಕಳಿಸೋದಿಕ್ಕೆ ತೀರ್ಮಾನ ಮಾಡಿದರು.


ಗುಲಾಬಿ ಚಡ್ಡಿ ಅಂತ ಕೇಳಿದ್ದೆ ಮುತಾಲಿಕ್ ಮಾಮನ ಮುಖ ನಾಚಿಕೆಯಿಂದ ಕೆಂಪಾಗಿ, ಅವರ ಕೇಸರಿ ಭಾವುಟ ಕೆಳಗೆ ಇಳಿದುಹೋಯಿತು. ಅಷ್ಟೊಂದು ಚಡ್ಡಿಗಳು ಮನೆ ಮುಂದೆ ಬಂದು ಬೀಳೋ ಸಾಧ್ಯತೆ ಕಂಡು ಮುತಾಲಿಕ್ ಮಾಮ ತಣ್ಣಗಾದರು. ನಾವು ಬೆಂಗಳೂರಿನಲ್ಲಿ ಏನು ಮಾಡೋದಿಲ್ಲ, ಬೇರೆ ಕಡೆ ವಿರೋಧ ಮಾಡ್ತಿವಿ ಅಂಥ ಹೇಳಿಕೆ ಕೊಟ್ರು.


ಅದರ ಪರಿಣಾಮದಿಂದ ಬೆಂಗಳೂರಿನಲ್ಲಿ ೧೪ ರಂದು ರಾಮನ ಸೇನಾನಿಗಳ ಸುಳಿವೇ ಇರಲಿಲ್ಲ. ನಾನು ಪಾರ್ಕು, ಪಬ್ಬು, ಮಾಲು ಅಂಥ ಸುತ್ತಿದೆ, ಆದರೆ ಏನು ಉಪಯೋಗವಾಗಲಿಲ್ಲ.


ನಾನು ಮಾತ್ರ, ಅಲ್ಲ ಪಾಪ ನಮ್ಮ ವಾಟಾಳಣ್ಣ (ಅದೇ ಕನ್ನಡ ಚಳುವಳಿ ಪಕ್ಷದ ನೇತಾರ, ನಮ್ಮ ಒರಿಜಿನಲ್ ಕನ್ನಡದ ಹುಟ್ಟು ಹೋರಾಟಗಾರ ನಾಗರಾಜಪ್ನೋರು)ಕೂಡ ಮುತಾಲಿಕರ ಹೇಳಿಕೆ ಕೇಳಿ ಬೇಜಾರ್ ಮಾಡ್ಕೊಂಡು ಕೂತ್ಬಿಟ್ರು. ಪ್ರೇಮಿಗಳಿಗೋಸ್ಕರ ಅಂತ ೫೦ ಬಸ್ಸುಗಳನ್ನ ಕಾಯ್ದಿರಿಸಿದ್ರಂತೆ ವಾಟಾಳಪ್ಪ್ನೋರು.


ಏನು ಮಾಡೋದು ನನ್ನ ನಸೀಬು ಅಂಥದ್ದು. ಹಿಂಗಾದ್ರು ತಾಳಿ ಭಾಗ್ಯ ಸಿಗುತ್ತೇನೋ ಅಂತ ಯೋಚ್ನೆ ಮಾಡಿದ್ದೆ... ಅದು ಕೈ ಗೂಡಲಿಲ್ಲ.......

No comments: